ಕೀಲ್ ಕಾಲುವೆ

ಉತ್ತರ ಸಮುದ್ರ ಮತ್ತು ಬಾಲ್ಟಿಕ್ ಕಡಲುಗಳನ್ನು ಕೂಡಿಸುವ ಕಾಲುವೆ. 1887-95ರಲ್ಲಿ ನಿರ್ಮಿತವಾದ ಇದನ್ನು 1907-14ರಲ್ಲಿ ವಿಸ್ತರಿಸಲಾಯಿತು. ಹೋಲ್ಟೆನೌ ಮತ್ತು ಬ್ರನ್ಸ್‍ಬುಟೆಲ್‍ಕೂಗ್ ಗಳೆಡೆಗಳಲ್ಲಿರುವ ತೂಬುಗಳು 1082.6' ಉದ್ದ, 147' ಅಗಲ ಮತ್ತು 45.9' ಎತ್ತರವಾಗಿವೆ. ಹೋಲ್ಟೆನೌ ಎಂಬುದು ಕೀಲ್‍ನ ಬಂದರು. ಬ್ರನ್ಸ್‍ಬುಟೆಲ್‍ಕೂಗ್ ಎಂಬುದು ಎಲ್ಬ್ ನದಿಯ ಮುಖ. ಕಾಲುವೆಯ ಉದ್ದ 53.3 ನಾವಿಕ ಮೈ., ಅಗಲ 338', ಆಳ 37.07'.

ಪ್ರಾರಂಭದಲ್ಲಿ ಈ ಕಾಲುವೆಯನ್ನು ಸೈನಿಕರ ಸಾಗಾಣಿಕೆಗೆ ಮಾತ್ರ ಉಪಯೋಗಿಸಲಾಗುತ್ತಿತ್ತು. ಕಾಲಕ್ರಮೇಣ ಸರಕು ಸಾರಿಗೆಯೂ ಆರಂಭವಾಯಿತು. ಎರಡನೆಯ ಮಹಾಯುದ್ಧಕ್ಕೆ ಮುಂಚೆ ಇದು ಜರ್ಮನಿಯ ಒಡೆತನಕ್ಕೆ ಒಳಪಟ್ಟಿತು. 1919ರ ವರ್ಸೇಲ್ಸ್ ಕೌಲಿನ ಪ್ರಕಾರ ಈ ಕಾಲುವೆಯ ಬಳಕೆಯನ್ನು ಅಂತರರಾಷ್ಟ್ರೀಕರಿಸಲಾಗಿತ್ತು. ಶುಲ್ಕ ವಸೂಲಿ ಮಾಡಬೇಕಾಗಿದ್ದುದು ಅದರ ದುರಸ್ತಿಗಾಗಿ ಮತ್ತು ನಿರ್ವಹಣ ವೆಚ್ಚಕ್ಕಾಗಿ ಮಾತ್ರ. ಅಡಾಲ್ಫ್ ಹಿಟ್ಲರ್ ಈ ಷರತ್ತುಗಳನ್ನು ತಿರಸ್ಕರಿಸಿದ. ಎರಡನೆಯ ಮಹಾಯುದ್ಧಾನಂತರ ಇದು ಪಶ್ಚಿಮ ಜರ್ಮನಿಗೆ ಸೇರಿತು.

ಕೀಲ್ ಕಾಲುವೆ ಉತ್ತರ ಸಮುದ್ರ ಮತ್ತು ಬಾಲ್ಟಿಕ್ ಸಮುದ್ರಗಳನ್ನು ಕೂಡಿಸುವ ಅತಿ ಸುರಕ್ಷಿತವಾದ, ಬಹಳ ಅನುಕೂಲಗಳುಳ್ಳ ಮತ್ತು ಅತಿ ಕಡಿಮೆ ವೆಚ್ಚದ ಜಲಮಾರ್ಗ. 1913ರಲ್ಲಿ ಒಟ್ಟು 1,03,50,000 ಟನ್ ನಿವ್ವಳ ತೂಕದ ನೀರಿನ ಭಾಗವನ್ನಾಕ್ರಮಿಸುವ, 55,382 ಹಡಗುಗಳು ಇದರ ಮೂಲಕ ಸಾಗಿದವು. 1960ರಲ್ಲಿ 4,15,27,000 ಟನ್ ನಿವ್ವಳ ತೂಕದ ನೀರಿನ ಭಾಗವನ್ನಾಕ್ರಮಿಸುವ 80,303 ಹಡಗುಗಳು ಸಾಗಿದುವು.

(ಎಂ.ಎಸ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ